ನಾಸಿರ್ - ಉದ್ - ದೀನ್
 1500-1511ರಲ್ಲಿ ಮಾಳ್ವವನ್ನಾಳಿದ ಸುಲ್ತಾನ. ತಂದೆ ಘಿಯಾಸ್-ಉದ್-ದೀನ್ ತನ್ನ ಆಳ್ವಿಕೆಯ ಆರಂಭದ ಕಾಲದಲ್ಲಿ ನಾಸಿರ್-ಉದ್-ದೀನನಿಗೆ ಆಡಳಿತದ ಹೊಣೆಯನ್ನು ವಹಿಸಿಕೊಟ್ಟು 16,000ಕ್ಕೂ ಹೆಚ್ಚಿನ ಸ್ತ್ರೀಯರಿದ್ದ ತನ್ನ ಜನಾನದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ. ಘಿಯಾಸ್-ಉದ್-ದೀನನ ಕೊನೆಗಾಲದಲ್ಲಿ ಸಿಂಹಾಸನಕ್ಕಾಗಿ ನಾಸಿರ್-ಉದ್-ದೀನನಿಗೂ ವನ ಮಲತಮ್ಮ ಅಲಾ-ಉದ್-ದೀನನಿಗೂ ಹೋರಾಟ ನಡೆಯಿತು. ನಾಸಿರ್-ಉದ್-ದೀನ್ 1500ರ ಅಕ್ಟೋಬರ್ 22ರಂದು ಸಿಂಹಾಸನ ಏರಿದ. ಅಲಾ-ಉದ್-ದೀನ್ ಕೊಲೆಯಾದ. ಅವನ ತಾಯಿಯೂ ಘಿಯಾಸ್-ಉದ್‍ದೀನನ ಮೆಚ್ಚಿನ ರಾಣಿಯೂ ಆದ ಖುರ್ಷಿಯಾಳನ್ನು ಸೆರೆಯಲ್ಲಿಡಲಾಯಿತು. ಸ್ವಲ್ಪ ಕಾಲದಲ್ಲಿ (1501) ಘಿಯಾಸ್-ಉದ್-ದೀನ್ ತೀರಿಕೊಂಡ. ನಾಸಿರ್-ಉದ್-ದೀನ್ ಅವನಿಗೆ ವಿಷ ಇಕ್ಕಿದನೆಂದು ವದಂತಿ ಹಬ್ಬಿತ್ತು.

    ನಾಸಿರ್-ಉದ್-ದೀನನನ್ನು ಸುಲ್ತಾನನೆಂದು ಒಪ್ಪದೆ ದಂಗೆ ಎದ್ದವರನ್ನು ಅವನು ದಮನ ಮಾಡಿದ. 1503ರಲ್ಲಿ ಅವನು ಚಿತ್ತೂರಿನ ಮೇಲೆ ದಂಡೆತ್ತಿಹೋದ. ಮಹಾರಾಣಾ ರಾಯಿಮಲ್ ಅವನಿಗೆ ಹಣ ಕೊಟ್ಟು ವಿರೋಧವನ್ನು ನಿವಾರಿಸಿಕೊಂಡನೆಂದು ಮುಸ್ಲಿಂ ಚರಿತ್ರೆಕಾರರೂ, ನಾಸಿರ್-ಉದ್-ದೀನನ ಸೈನ್ಯ ಮಹಾಪರಾಭವಕ್ಕೆ ಒಳಗಾಯಿತೆಂದು ರಜಪೂತರೂ ಬರೆದಿದ್ದಾರೆ.

    ನಾಸಿರ್-ಉದ್-ದೀನನ ಆಳ್ವಿಕೆಯ ಕೊನೆಗಾಲದಲ್ಲಿ (1510) ಅವನ ಮಗ ಷಿಹಾಬ್-ಉದ್-ದೀನ್ ದಂಗೆ ಎದ್ದ. ಷಿಹಾಬ್-ಉದ್-ದೀನ್ ಧಾರಾ ಪಟ್ಟಣವನ್ನು ಆಕ್ರಮಿಸಿಕೊಂಡ. ಆದರೆ ಸುಲ್ತಾನ ಅವನ ಮೇಲೆ ಕಾರ್ಯಾಚರಣೆ ನಡೆಸಿ ಅವನ ಯೋಜನೆಯನ್ನು ವಿಫಲಗೊಳಿಸಿದ. ಸುಲ್ತಾನ ತರುವಾಯ ತನ್ನ ಕಿರಿಯ ಮಗ ಆಜûಂ ಹುಮಾಯೂನನಿಗೆ ಮಹಮೂದ್ ಶಾಹ ಎಂಬ ಬಿರುದನ್ನು ನೀಡಿ ಅವನನ್ನು ತನ್ನ ಉತ್ತರಾದಿಕಾರಿಯಾಗಿ ನೇಮಿಸಿದ. 511ರಲ್ಲಿ ನಾಸಿರ್-ಉದ್-ದೀನ್ ತೀರಿಕೊಂಡ ಕೂಡಲೇ ಮಹಮೂದ್ ಶಾಹ ಸಿಂಹಾಸನವನ್ನೇರಿದ. ಸಿಂಹಾಸನಕ್ಕಾಗಿ ಷಿಹಾಬ್-ಉದ್-ದೀನ್ ಹೋರಾಟ ನಡೆಸಿದ. ಅವನು ಮಹಮೂದ್ ಶಾಹನಿಂದ ಸೋತು ಹೋದ. 

    ನಾಸಿರ್-ಉದ್-ದೀನ್ ಕ್ರೂರಿಯೂ ಮುಂಗೋಪಿಯೂ ಆಗಿದ್ದ. ಅವನ ಆಸ್ಥಾನಿಕರೇ ಅವನ ವಿರುದ್ಧ ಷಿಹಾಬ್-ಉದ್-ದೀನನನ್ನು ಎತ್ತಿಕಟ್ಟಿದರೆಂದು ಹೇಳಲಾಗಿದೆ. ಅವನ ಅಧಿಕಾರದ ಅವಧಿಯಲ್ಲಿ ಮಾಳ್ವಕ್ಕೆ ಹೆಚ್ಚು ಪ್ರದೇಶವೇನನ್ನೂ ಸೇರಿಸದಿದ್ದರೂ ಅವನು ಅದರ ಸಮಗ್ರತೆಯನ್ನು ಉಳಿಸಿಕೊಂಡ.
(ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ